ಎಫಿಡ್ರ ಗಿಡ
ನೇಟೇಸಿ ಕುಟುಂಬಕ್ಕೆ ಸೇರಿದ ಒಂದು ಪ್ರಭೇದ. ಹಾರ್ಸ್‍ಟೇಲ್ ಎಂಬ ಗಿಡಕ್ಕೆ ಪ್ಲಿನೀ ಇಟ್ಟ ಗ್ರೀಕ್ ಹೆಸರು. ಸಮಶೀತೋಷ್ಣ ವಲಯದ ಒಣಹವೆಯಲ್ಲಿ ಬೆಳೆಯುತ್ತದೆ. ಯಾರೂ ಹೆಚ್ಚಾಗಿ ಇವನ್ನು ವ್ಯವಸಾಯ ಮಾಡುತ್ತಿಲ್ಲ. ಸಸ್ಯಶಾಸ್ತ್ರೀಯ ಉದ್ಯಾನಗಳಲ್ಲಿ ಮಾತ್ರ ಕೆಲವೆಡೆ ಬೆಳೆಸುತ್ತಾರೆ. ಇವುಗಳ ಕಡುಗೆಂಪು ಬಣ್ಣದ ಹಣ್ಣುಗಳು ನೋಡಲು ಚೆನ್ನ. ಗಿಡ ಎತ್ತರ ಬೆಳೆಯುವುದು. ರೆಂಬೆಗಳು ಹೆಚ್ಚು. ನೋಡಲು ಪೊದೆಯಂತಿರುತ್ತದೆ. ಎಲೆ ತೆಳು, ಜೋಡಿಯಾಗಿವೆ. ದಕ್ಷಿಣ ಯೂರೋಪು, ಉತ್ತರ ಆಫ್ರಿಕ, ಏಷ್ಯ ಮತ್ತು ಅಮೆರಿಕ ಉಷ್ಣವಲಯದ ಭಾಗಗಳಲ್ಲಿ 30 ಪ್ರಭೇದಗಳನ್ನು ಗುರುತಿಸಲಾಗಿದೆ. ಭಾರತದಲ್ಲಿ ಈ ಕೆಲವು ಪ್ರಭೇದಗಳು ಕಂಡುಬಂದಿವೆ ; ಎಫಿಡ್ರ ಗೆರಾರ್ಡಿನ (ಕಾಶ್ಮೀರ, ಸಿಕ್ಕಿಂ), ಎಫಿಡ್ರ ಇಂಟರ್‍ಮೀಡಿಯ ವರ್ ಟಿಬೆಟಿಕ (ಕಾಶ್ಮೀರ, ಕುಲುಕಣಿವೆ), ಎಫಿಡ್ರ ಪೋಲಿಯೇಟ (ದಕ್ಷಿಣ ಪಂಜಾಬ್, ರಾಜಾಸ್ತಾನ್), ಬೀಜಗಳಿಂದ ತುಂಡುಗಳಿಂದ ಹೊಸಗಿಡಗಳನ್ನು ಪಡೆಯಬಹುದು. ಎಫಿಡ್ರ ವಲ್ಗ್ಯಾರಿಸ್ ಮುಂತಾದ ಕೆಲವು ಪ್ರಭೇದಗಳಿಂದ ಮಾಹುವಾಂಗ್ ಎಂಬ ಔಷಧವನ್ನು ಚೀನೀಯರು ಬಹು ಹಿಂದಿನಿಂದಲೂ ತಯಾರಿಸುತ್ತಿದ್ದರು. ಗಿಡಕ್ಕೆ ವಯಸ್ಸಾದಂತೆಲ್ಲ ಅದರಲ್ಲಿ ಔಷಧಗುಣ ಹೆಚ್ಚುತ್ತದೆ. ನಾಲ್ಕು ವರ್ಷದ್ದಾಗಿದ್ದು ಹೂ ಬಿಡುವ ಗಿಡಗಳಲ್ಲಿನ ರೆಂಬೆಗಳಲ್ಲಿ ಎಫಿಡ್ರೀನ್ ಹೇರಳವಾಗಿರುತ್ತದೆ. ಎಫಿಡ್ರ ಮೇಜರ್ ಪ್ರಭೇದದಲ್ಲಿ ಮದ್ದಿನ ಪ್ರಮಾಣ ಬಲು ಹೆಚ್ಚೆಂದು ತಿಳಿದು ಬಂದಿದೆ. ಈಗ ಎಫಿಡ್ರೀನನ್ನು ಇನ್ನೂ ಸರಳವಾಗಿ ಕೃತಕ ವಿಧಾನಗಳಿಂದ ಪಡೆಯುತ್ತಾರೆ. 1887ರಲ್ಲೇ ನಗಾಯಿಯೆಂಬಾತ ಈ ಸಂಯುಕ್ತವನ್ನು ಕಂಡು ಹಿಡಿದನಾದರೂ ಇದರ ರೋಗನಿವಾರಕ ಗುಣಗಳನ್ನು ಪರಿಶೀಲಿಸಿದವ ಡಾ. ಷ್ಮಿಡ್ಟ್ (1929). ನೆಗಡಿ ಮತ್ತು ಇತರೆ ಬೇನೆಗಳಲ್ಲಿ ಮೂಗಿನಿಂದ ನೀರು ಸುರಿಸುವುದನ್ನು ತಪ್ಪಿಸಲು ರಕ್ತನಾಳಗಳು ಕುಗ್ಗುವಂತೆ ಮಾಡಲು, ಗೂರಲಿನ ಉಬ್ಬಸವನ್ನು ನಿಧಾನವಾಗಿ ಅಡಗಿಸಲು, ಬರದಂತೆ ತಡೆಯಲು ವೈದ್ಯರಲ್ಲಿ ಇದು ಬಳಕೆಯಲ್ಲಿದೆ. ಇದನ್ನು ಕೊಟ್ಟಾಗ ರಕ್ತ ಒತ್ತಡ ಏರುವುದಲ್ಲದೆ ಮಿದುಳಿನ ಚೋದನೆಯಾಗಿ ನಿದ್ದೆ ಕೆಡುತ್ತದೆ. 						
    (ಜಿ.ಆರ್.ಸಿ.; ಡಿ.ಎಸ್.ಎಸ್.; ಎಂ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ